ಶರತ್ ಎಚ್ ಕೆ
ಬದುಕು ಅಮೂರ್ತ ರೂಪದ ವಾರಸುದಾರಗೊಂದಲದ ಗುಡಿಯಲ್ಲಿ ಧ್ಯಾನಕ್ಕೆ ಕುಳಿತ ಮನಸ್ಸಿಗೆ ನಾಳೆ ಎಂದರೆ ಕೊಂಚ ಪ್ರೀತಿ, ಅತಿಯಾದ ಭೀತಿ! ನಿನ್ನೆ ಮತ್ತೆ ಬರುವುದಿಲ್ಲವೆಂದು ಗೊತ್ತಿದ್ದರೂ ಕಳಕೊಂಡ ಕನಸುಗಳ ಹುಡುಕಾಟಕ್ಕೆ ಪೂರ್ಣ ವಿರಾಮ ಇಡಲಾಗದು. ನಾಳೆ ಅನಿಶ್ಚಿತತೆಯ ಗೂಡೆಂಬ ಅರಿವಿದ್ದರೂ ಭರವಸೆಗಳ ಮಳೆ ಸುರಿಯುವುದು ನಿಲ್ಲದು. ಜೊತೆಗೆ ಏನಾಗುವುದೋ ಎಂಬ ಗುಡುಗು ಮಿಂಚಿನ ಆರ್ಭಟ ಬೇರೆ.ಕ್ಷಣಿಕ, ಕ್ಷುಲ್ಲಕ, ಮೋಹಕ, ರೋಚಕ…
ಬದುಕಿಗೆ ಎಷ್ಟೊಂದು ಬಣ್ಣಗಳು? ಆದರೂ ಬದುಕು ಕೆಲವೊಮ್ಮೆ ಕಳೆಗುಂದುತ್ತದೆ. ನಿರಾಸೆಯ ತೀರದಲ್ಲಿ ನಿಂತು ಭರವಸೆಯ ಹಾದಿ ಅರಸುತ್ತದೆ. ಒತ್ತಡಗಳಿಂದ ಪಾರಾಗುವ ಸಲುವಾಗಿ ಪ್ರತಿ ಮನವೂ ತನ್ನದೇ ದಾರಿ ಕಂಡುಕೊಳ್ಳುವುದು. ಏಕಾಂತದ ಸಂತೆಯಲ್ಲಿ ಮನಸ್ಸಿಗೆ ಮನಸ್ಸೇ ಪ್ರತಿಸ್ಪರ್ಧೆ. ತಪ್ಪು ಸರಿಯ ತಕ್ಕಡಿ ಒಂದೆಡೆಗೆ ಸ್ಥಿರವಾಗಿ ವಾಲುವುದು ಅಪರೂಪ. ಬದುಕಿನೊಳಗೆ ಅಮೂರ್ತ ರೂಪ.

ಹುಟ್ಟಿದ್ದು ಏಕೆ? ಕಾರಣ ಗೊತ್ತಿಲ್ಲ. ಸಾಯಬೇಕೆ? ಸಾವು ನಮ್ಮದಲ್ಲ. ಏನನ್ನೂ ತಲೆಗೆ ಅಚ್ಚಿಕೊಳ್ಳಬಾರದೆಂಬ ಎಚ್ಚರದೊಂದಿಗೆ ಎಲ್ಲದಕ್ಕೂ ತಲೆ ಕೆಡಿಸಿಕೊಳ್ಳುವ ಮನದ ತಿಕ್ಕಲುತನಕ್ಕೆ ಏನೆನ್ನುವುದು?ಹುಚ್ಚು ಯಾರಿಗಿಲ್ಲ? ಪ್ರೀತಿಸುವ, ರೋದಿಸುವ, ಮೋಹಿಸುವ… ಹೀಗೆ ಏನೇನನ್ನೋ ಎಸಗಲು ಬಯಸುವ ಮನ ಹತ್ತು ಹಲವು ಹುಚ್ಚುಗಳಿಗೆ ವಾರಸುದಾರ. ಇದ್ಯಾವುದನ್ನೂ ಮಾಡಬಾರದೆಂದು ದೌರ್ಬಲ್ಯಗಳಿಗೆ ಮೂಗುದಾರ ಹಾಕುವುದೂ ಒಂದು ಹುಚ್ಚೇ!ಹಣ ಕೈ ಸೇರುವವರೆಗೂ ಹಣ ಕೂಡಿಡುವ ಕ್ರಿಯೆ ಅಚ್ಚುಮೆಚ್ಚು.
ಅದು ಸರಾಗವಾಗಿ ಕೈ ಸೇರಲಾರಂಭಿಸಿದ ಮೇಲೆ ಹಣವೆಂದರೆ ಅಸಡ್ಡೆ. ನಮ್ಮ ಚಿತ್ತವೆಲ್ಲ ಸುಖದ ದಾರಿ ಅರಸುವ ಕಡೆಗೆ.ಅದು ಮಾಡಬೇಕು, ಇದಾಗಬೇಕು, ಹಾಗಾಗಬೇಕು… ಬೇಕುಗಳ ಯಾತ್ರೆಗೆ ದಿಗಂತದ ದರ್ಶನವಾಗುವುದಿಲ್ಲ. ಹಳೆ ಬೇಕುಗಳು ಅದ್ಯಾಕೋ ಅಳಿಯುತ್ತವೆ. ಹೊಸ ಬಯಕೆಗಳು ಅಕಾರಣವಾಗಿ ಚಿಗುರೊಡೆಯುತ್ತವೆ.ಬದುಕಬೇಕು ಸರಿ. ಏಕೆ? ಕಾರಣ ಕೊಡಲು ಬದುಕು ನಮ್ಮ ಆಯ್ಕೆಯಲ್ಲ. ನಾವು ಬದುಕಬೇಕು ಅಷ್ಟೇ.ನಮ್ಮ ಹಾಗೆ ಜನಿಸಿದ, ನಮ್ಮಂತಹವರೆ ಆದ ಜನ ನಿರ್ಮಿಸಿದ ಚೌಕಟ್ಟು ಅಚ್ಚುಕಟ್ಟೆನಿಸಿದರೂ ಅದೇ ಬಿಕ್ಕಟ್ಟಾಗಿ ಎದುರು ನಿಲ್ಲುತ್ತದೆ.
‘ಸಮಾಜ’ ಸೃಷ್ಟಿಸಿದ್ದು ಯಾರು? ಅದಕ್ಕೆ ರೀತಿ ನೀತಿಗಳ ಅಣೆಕಟ್ಟು ಕಟ್ಟಿದ್ದೇಕೆ? ದುಡಿಮೆ ಮತ್ತು ದುಡ್ಡು ಬಯಸದ ಜಗದ ಜೀವನ ಹೇಗಿರುತ್ತಿತ್ತು? ನಮ್ಮ ಒಂದಷ್ಟು ಚಿಂತೆಗಳಿಗೆ ಮುಕ್ತಿ ದೊರೆಯುತ್ತಿರಲಿಲ್ಲವೇ?ದುಡ್ಡು ಹಸಿವಿನ ಕರ್ತೃ. ದುಡಿಮೆ ಅರ್ಥವಾಗದ ಸಂಗತಿ. ಮನುಷ್ಯ ದುಡಿಯಬೇಕು. ಇದು ಜಗದ ನಿಯಮ. ದುಡಿಯದೇ ತಿನ್ನುವಂತಿದ್ದರೆ?ಆದರೆ, ಹೋದರೆಗಳೆಂದರೆ ಮನಸ್ಸಿಗೆ ಅದೇನೊ ಪ್ರೀತಿ. ಕ್ರಿಯೆಗಳು ಅಂದುಕೊಂಡಂತೆ ಸಾಗದೇ ಹೋದ ಸಂದರ್ಭದಲ್ಲಿ ಈ ‘ಹಾಗಾಗಿದ್ದರೆ’ಯ ಪಯಣ ಪ್ರಾರಂಭವಾಗುತ್ತದೆ. ಅದು ಹಾಗಾಗಿದ್ದರೆ ನನ್ನ ಬದುಕು ಹೀಗಿರುತ್ತಿರಲಿಲ್ಲವೆಂದು ಗೊಣಗುತ್ತೇವೆ. ಗೊಣಗುತ್ತಲೇ ನಮ್ಮ ಪಾಲಿಗೆ ಒಲಿದ ಬದುಕು ದೂಡುತ್ತೇವೆ.






ಶರತ್ ನೀವು ಹೇಳಿದಂತೆ ನಾವು ಬಹಳಷ್ಟು ಜನ ಗೊಣಗುತ್ತಲೇ ನಮ್ಮ ಪಾಲಿಗೆ ಒಲಿದ ಬದುಕನ್ನು ದೂಡುತ್ತೇವೆ. ನಿಮ್ಮ ಲೇಖನ ಚನ್ನಾಗಿ ಮೂಡಿಬಂದಿದೆ.